ರಾಮರಾವ್, ಲಕ್ಷ್ಮೀಶ್ವರ
1896-1974. ಭಾರತದ ಪ್ರಸಿದ್ಧ ಭೂವಿಜ್ಞಾನಿ. ಜನಿಸಿದ್ದು ಬೆಂಗಳೂರಿನಲ್ಲಿ (23 ಜನವರಿ 1896). ಇವರ ತಂದೆ ರಾಘವೇಂದ್ರರಾವ್ ದೇಶಪಾಂಡೆ; ತಾಯಿ ನಾಗೂಬಾಯಿ. ಇವರ ಪೂರ್ವಜರು ಮೂಲತಃ ಲಕ್ಷ್ಮೇಶ್ವರದವರು. ಚಿಕ್ಕಂದಿನಲ್ಲಿ ರಾಮರಾವ್ ಅವರಿಗೆ ಮಾತೃ ವಿಯೋಗವಾಯಿತು. ಇವರ ಆರಂಭಿಕ ವಿದ್ಯಾಭ್ಯಾಸ ನಡೆದದ್ದು ಬೆಂಗಳೂರಿನಲ್ಲಿ. 1918ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗಮಾಡಿ ಬಿ.ಎಸ್‍ಸಿ.ಪದವಿ ಪಡೆದರು. ಅನಂತರ ಅದೇ ಕಾಲೇಜಿನಲ್ಲಿ ಭೂವಿಜ್ಞಾನದ ಅಧ್ಯಾಪನವೃತ್ತಿ ಪ್ರಾರಂಭಿಸಿ, ಮುಂದೆ ಪ್ರಾಧ್ಯಾಪಕರೂ ಆಗಿ ಆ ವಿಭಾಗದ ಮುಖ್ಯಸ್ಥರಾಗಿ ಮೂರು ದಶಕಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿಸಿ, 1951ರಲ್ಲಿ ನಿವೃತ್ತರಾದರು. ಭೂವಿಜ್ಞಾನದ ಸೇವೆಗಾಗಿ ನೂರಾರು ನಿಷ್ಣಾತ ವಿದ್ಯಾರ್ಥಿಗಳು ಇವರ ಸೇವಾವಧಿಯಲ್ಲಿ ತರಬೇತು ಪಡೆದರು. ಭೂವಿಜ್ಞಾನದ ಹಲವು ಶಾಖೆಗಳಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇತ್ತು. ಭೂಇತಿಹಾಸ ಮತ್ತು ಪ್ರಾಗ್ಜೀವಿ ವಿಜ್ಞಾನಗಳ ಬಗ್ಗೆ ಅದರಲ್ಲೂ ಭಾರತದ ಭೂಇತಿಹಾಸದ ಬಗ್ಗೆ ಇವರು ಅಧಿಕಾಸಕ್ತಿ ಬೆಳೆಸಿಕೊಂಡಿದ್ದರು. ಇವರ ಬೋಧನಾಕ್ರಮ ಹೆಚ್ಚು ಆಕರ್ಷಣೀಯವೂ ಸ್ಪೂರ್ತಿದಾಯಕವೂ ಅಲ್ಲದೆ ಸ್ಪಷ್ಟ ಅಭಿಪ್ರಾಯಗಳಿಂದ ಕೂಡಿತ್ತು. ಇವರ ಸಂಶೋಧನಾ ಪ್ರಕಟಣೆಗಳು ನೂರಕ್ಕೂ ಹೆಚ್ಚಾಗಿದ್ದು, ಅವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಪಂಚಾದ್ಯಂತ ಅತ್ಯಂತ ಕುತೂಹಲಕಾರಿ ವಿಷಯ ಎಂದೆನಿಸಿರುವ ಕ್ರಿಟೇಷಸ್ ಯುಗ ಮತ್ತು ತೃತೀಯ ಜೀವಿಕಲ್ಪಗಳ ನಡುವಿನ ಸೀಮಾ ರೇಖೆಯನ್ನು ಕುರಿತಂತೆ ರಾಮರಾವ್ ಪರಿಷ್ಕರಿಸಿ ಹಲವಾರು ಪ್ರಬಂಧಗಳನ್ನು ಒಳಗೊಂಡ ಆಧಾರ ಗ್ರಂಥವೊಂದನ್ನು ಹೊರತಂದು (1966) ಈ ಸಂಬಂಧದಲ್ಲಿ ಇದ್ದ ಕ್ಲಿಷ್ಟಸಮಸ್ಯೆಯನ್ನು ಕುರಿತಾದ ಸಂದಿಗ್ಧತೆಯನ್ನು ಹೋಗಲಾಡಿಸಿದರು.

ರಾಮರಾವ್ ಅವರು 'ಜಿಯೊಲಾಜಿಕಲ್ ಸೊಸೈಟಿ ಆಫ್ ಇಂಡಿಯ ಸಂಸ್ಥೆಯ ಸಂಸ್ಥಾಪಕರಾಗಿದ್ದರು. ಆ ಸಂಸ್ಥೆಯ ಅಧ್ಯಕ್ಷರಾಗಿ ಆ ಸಂಸ್ಥೆ ಹೊರತರುತ್ತಿದ್ದ ನಿಯತಕಾಲಿಕದ ಸಂಪಾದಕರಾಗಿ 13 ವರ್ಷಗಳ ದೀರ್ಘಸೇವೆ ಸಲ್ಲಿಸಿದರು. ಇವರ ಸಂಶೋಧನಾ ಪ್ರಕಟಣೆಗಳನ್ನು ಗಮನಿಸಿದ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ 1940ರ ಭೂವಿಜ್ಞಾನ ವಿಭಾಗದ ವಿದ್ವತ್‍ಸಭೆಗೆ ಇವರನ್ನು ಅಧ್ಯಕ್ಷರನ್ನಾಗಿ ಚುನಾಯಿಸಿತು. ಏಷ್ಯದ ಭೂಇತಿಹಾಸ ಮತ್ತು ಪ್ರಾಗ್ಜೀವಿ ವಿಜ್ಞಾನಗಳಿಗೆ ಅಪಾರ ಕೊಡುಗೆಗಳನ್ನಿತ್ತ ರಾಮರಾವ್ ಅವರಿಗೆ, ಬಂಗಾಲದ ಏಷ್ಯಾಟಿಕ್ ಸೊಸೈಟಿ ಪ್ರಮಥನಾಥ್ ಬೋಸ್ ಪ್ರಶಸ್ತಿ ಪದಕವನ್ನು ನೀಡಿ ಗೌರವಿಸಿತು. ಯು. ಎಸ್. ಎಸ್. ಆರ್. ವಿಜ್ಞಾನ ಅಕೆಡಮಿ ಇವರನ್ನು ಅಂತಾರಾಷ್ಟ್ರೀಯ ಕ್ರಿಟೇಷನ್ ಮತ್ತು ತೃತೀಯ ಜೀವಿಕಲ್ಪದ ನಡುವಣ ಸೀಮಾ ರೇಖೆಯನ್ನು ನಿರ್ಧರಿಸುವ ತಂಡದ ಮುಖಂಡರನ್ನಾಗಿ ನೇಮಕಮಾಡಿತ್ತು. ಭಾರತದ ತೈಲ ಮತ್ತು ಪ್ರಾಕೃತಿಕ ಅನಿಲ ಸಂಸ್ಥೆಯಿಂದ (ಓ.ಎನ್.ಜಿ.ಸಿ.) ಶಿಕ್ಷಣಾರ್ಥಗಳ ನಿರ್ದೇಶಕರಾಗಿ ಕಾರ್ಯನಿರ್ವಹಿಸಲು ಇವರಿಗೆ ಕೋರಿಕೆ ಬಂದಿತ್ತಾದರೂ ಅದನ್ನು ತಿರಸ್ಕರಿಸಿ ಭಾರತೀಯ ಭೂವೈಜ್ಞಾನಿಕ ಸಂಘದ ಅಧ್ಯಕ್ಷರಾಗಿಯೇ ಮುಂದುವರೆದರು.
ರಾಮರಾವ್ ಸರಳ ಹಾಗೂ ಉದಾತ್ತ ನೀತಿ ನಿಷ್ಠೆಯ ವ್ಯಕ್ತಿಯಾಗಿದ್ದರು. ಕೆಲಕಾಲ ಪಾಶ್ರ್ವವಾಯು ಪೀಡಿತರಾಗಿ ರಾಮರಾವ್ 1974 ನವೆಂಬರ್ 11 ರಂದು ನಿಧನಹೊಂದಿದರು.              

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ